-->
ವಂಶ ವೃಕ್ಷದ ಸ್ವರೂಪವೇ ಹೆಳವರು-Special

ವಂಶ ವೃಕ್ಷದ ಸ್ವರೂಪವೇ ಹೆಳವರು-Special

ವಂಶ ವೃಕ್ಷದ ಸ್ವರೂಪವೇ ಹೆಳವರು

ಹೇಳಿಕೊಳ್ಳಾಕ ಒಂದೂರು.. ತಲೆಮ್ಯಾಗೆ ಒಂದೂಸೂರು... ಮಲಗಾಕೆ ಭೂಮ್ತಾಯಿ ಮಂಚಾ.....ಎಂಬಂತೆ,
ಪಟ್ಟಣದ ಹೊರವಲಯದಲ್ಲಿ ಅಥವಾ ಗ್ರಾಮದ ಅಂಚಿನಲ್ಲಿ ಜೋಪಡಿ ಹಾಕಿಕೊಂಡಿರೋರೆ ಹೆಳವರು.
 ಒತ್ತಾರೆದ್ದು ಬೀರಪ್ಪನ ನೆನೆದು ಹಣೆಗೆ ಬಂಡಾರ ತೇದು ದೇವರ ನೆನೆಯುತ ಅರಿವೆ ಚೀಲದಲ್ಲಡಗಿಸಿರುವ, ಪೂರ್ವಜರಿಂದ ಜಥನವಾಗಿರಿಸಿ ಕಾಪಿಟ್ಟಿರುವ ವಂಶವೃಕ್ಷದ ಹೂರಣವಿರುವ ಹೊತ್ತಿಗೆ ಯ ಅರಿವಿಚೀಲವನ್ನ ತಮ್ಮ ಹೆಗಲಿಗೇರಿಸಿಕೊಂಡಿರುತ್ತಾರೆ ಹೆಳವರು.
ತಮ್ಮ ಸಾಂಪ್ರದಾಯಿಕ ಪೇಟವನ್ನು ಶಿರನಾಮೆ ಮೇಲಿರಿಸಿಕೊಂಡು ಅಡಿಕೆ ಎಲೆಯನ್ನು ಜಮಡುತ್ತಾ, ತಮ್ಮ ಆಯಾಗಾರರ ಮನೆಯಂಗಳಕ್ಕೆ ತುಂಬಾ ನಾಜೂಕಾಗಿ ಲಗ್ಗೆಹಾಕುತ್ತಾರೆ.
ಮನೆಯ ಮಾಲೀಕರ ಮನೆತನವನ್ನು ತಮ್ಮದೇ ಆದ ಶೈಲಿಯಲ್ಲಿ ಹೊಗಳಿ, ಅವರಿಗರಿವಿರದ ಅವರ ವಂಶಾವಳಿಯನ್ನ ಹರವುತ್ತಾರೆ ಹೆಳವರು.ಯುವಪೀಳಿಗೆಗೆ ಪೂರ್ವಜರ ಪರ ಅರಿವು ಮೂಡಿಸಿ ಮನೆತನದ ಬಗ್ಗೆ ಅಭಿಮಾನ ಇಮ್ಮಡಿಗೊಳಿಸುತ್ತಾರೆ ಹೆಳವರು, ‌ಮನೆಯ ಮಾಲೀಕರ ಮನಸ್ಸನ್ನೇ ಕದಿಯುವ ಕರಾಮತ್ತರಿತವರು ಇವರು.ಮನೆಯ ಯಜಮಾನ ಕೊಡುವ ಉಡು ಗೊರೆಗೆ ಮನದುಂಬಿ ಅವರನ್ನರಸುತ್ತಾರೆ, ತೀರಾ ವಿಭಿನ್ನ ಶೇಲಿಯ ಕುಲಕರ್ಮಿಗಳಾಗಿರುವ  ಹೆಳವರದು ವೈಶಿಷ್ಟ್ಯಪೂರ್ಣ  ಜೀವನ ಶೈಲಿಯಾಗಿದೆ.
*ತಮ್ಮ ಅಲೆಮಾರಿ ವೃತ್ತಿಜೀವನದಿಂದ ಬದುಕು ಕಟ್ಟಿಕೊಂಡ ಮತ್ತು ಆ ಕಾರಣಕ್ಕೇ ಜಾತಿಗಣತಿಯ ಲೆಕ್ಕಕ್ಕೂ, ಸಮಾಜೋ-ಆರ್ಥಿಕ ಅಧ್ಯಯನಕ್ಕೂ ಸಿಕ್ಕದೆ ನುಣುಚಿಕೊಂಡ ಹಲವಾರು ಬುಡಕಟ್ಟುಗಳಲ್ಲಿ ಹೆಳವರದ್ದು ಕೂಡ ಒಂದು ಸಮುದಾಯ*
                             ***
ಪ್ರತಿಷ್ಠಿತ ಮನೆತನಗಳು ಸೇರಿದಂತೆ ಶ್ರೀಮಂತರ ಮನೆತನಗಳ  ಪೂರ್ವಾಪರಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲೆ ಮಾಡಿಕೊಂಡು, ಮುಂದಿನ ಪೀಳಿಗೆಗೆ‌ ಅದನ್ನ ಯತಾವತ್ತಾಗಿ ಮುಟ್ಟಿಸುವ ಸಮುದಾಯವೇ ಹೆಳವರ ಸಮುದಾಯ. 
ಸಾಮಾನ್ಯ ‌ಕುಟುಂಬದಿಂದ ಹಿಡಿದು ಸಿರಿವಂತರ ಮನೆತನದ ಪೂರ್ವಾಪರಗಳನ್ನು ತಮ್ಮದೇ ಶೈಲಿಯಲ್ಲಿ ದಾಖಲೆ ಮಾಡಿಕೊಂಡು ಮುಂದಿನ ಪೀಳಿಗೆಗೆ‌ ಮುಟ್ಟಿಸುವ ಈ ಸಮುದಾಯಕ್ಕೆ ಉತ್ತರ 
*ಕರ್ನಾಟದಲ್ಲಿ‌ "ಹೆಳವರು" ಎಂದು ಕರೆಯುತ್ತಾರೆ. ಸದ್ಯ ಹಳ್ಳಿ ಕಟ್ಟೆಯ ಮೇಲೆ ಇಂದು ಎಲ್ಲೆಡೆ ಹೆಳವರ ಧ್ವನಿಯ ಮೂಲಕ ಒಕ್ಕುಲತನ ಮನೆತನದವರ ಸಂತತಿಯ ಇತಿಹಾಸ ತಿಳಿಯಲು ಸಾಧ್ಯವಾಗುತ್ತಿದೆ*

 ಉತ್ತರ ಕರ್ನಾಟದಲ್ಲಿ‌ "ಹೆಳವರು" ಎಂದೇ ಗುರುತಿಸಿಕೊಳ್ಳುವ ಇವರು ಸದ್ಯ ಹಳ್ಳಿ ಕಟ್ಟೆಯ ಮೇಲೆ ಎಲ್ಲೆಡೆಗಲ್ಲಿ ತಮ್ಮ ವಿಶಿಷ್ಟ ಸಂಪ್ರಾಯಿಕ ಕಸುಬಿಮಿಂದಲೇ  ಗುರುತಿಸಿಕೊಳ್ಳುತ್ತಾರಿವರು.ಇವರಿಂದಲೇ ಮನೆತನದವರ ಸಂತತಿಯ ಇತಿಹಾಸ ತಿಳಿಯಲು ಸಾಧ್ಯವಾಗುತ್ತಿದೆ. ಒಕ್ಕಲುತನದ ಮಾಹಿತಿ ಹೇಳುವ ಹೆಳವರು ಹಳೆ ಸುಗ್ಗಿ ಮುಗಿಸಿ ಹೊಸ ಮುಂಗಾರು ಬಿತ್ತನೆಯ ನಡುವೆ,ರೈತರ ಮನೆಗಳಿಗೆ ತೆರಳಿ ಅವರೆದುರು ಅವರ  ಪಾರಂಪರಿಕ ಮನೆತನದವರ ಇತಿಹಾಸದ ಹೊತ್ತಿಗೆಯನ್ನು ಬಿಚ್ಚಿಡುತ್ತಾರೆ. ಇವರು ಆಗಮಿಸಿ ಹಳೆಯ ಮನೆತನದವರ ಹೆಸರನ್ನು ಹೊಗಳಿ, ಹರಸುತ್ತಾರೆ. ಹೊಸದಾಗಿ ಮದುವೆ ನಡೆದಲ್ಲಿ ಸೊಸೆಯರು ಮತ್ತು ಮಕ್ಕಳಾದಲ್ಲಿ ಅವರ ದಾಖಲಾತಿ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ರೈತರಿಂದ ದವಸ ಧಾನ್ಯ, ಪಾತ್ರೆ ಪಗಡೆ, ಹಸು- ಕರು ಸೇರಿದಂತೆ ವಿವಿಧ ವಸ್ತುಗಳನ್ನು ಪಡೆಯುತ್ತಾರೆ.
ಅಬ್ಬಬ್ಬಾ ಎಂದರೆ ನಮಗೆ ನಮ್ಮ ಕುಟುಂಬದ ಎಷ್ಟು ತಲೆಮಾರುಗಳ ಬಗ್ಗೆ ಗೊತ್ತು. ಅಜ್ಜ, ಮುತ್ತಜ್ಜ, ಮುಂದೆ... ? ಹೇಳಿ ಎಂದು ಕೇಳಿದರೆ ಹಿರಿಯರತ್ತ ನೋಟ ಹೋಗುತ್ತದೆ. ಇನ್ನು ಹಿರಿಯರು ಮೂರು ತಲೆಮಾರುಗಳನ್ನು ದಾಟಿ ಹೇಳಲು ಆಗುವುದಿಲ್ಲ. ಆದರೆ ಇವರು 10ಕ್ಕೂ ಹೆಚ್ಚು ತಲೆಮಾರುಗಳ ಕುರಿತು ಸವಿವರವಾಗಿ ಹೇಳುತ್ತಾರೆ.
ಕುರುಬ ಜನಾಂಗಕ್ಕೆ ಸೇರಿದ ಹೆಳವರು ಕುಟುಂಬವೊಂದರ ಸುಮಾರು 300 ವರ್ಷದ ಇತಿಹಾಸ ಹೇಳುತ್ತಾರೆ. ಈಚೆಗೆ ರೋಣಕ್ಕೆ ಬಂದಿರುವ ಕುಟುಂಬವೊಂದನ್ನು ಮಾತಿಗೆ ಸಿಕ್ಕಾಗ ದೊರೆತ ಮಾಹಿತಿ ಇಲ್ಲಿದೆ.
 ರಾಮಾಯಣ ಮಹಾಭಾರತದ ಕಾಲದಿಂದಲೂ ರಾಜರುಗಳ ವಂಶವನ್ನು ದಾಖಲು ಮಾಡಿಕೊಳ್ಳಲೆಂದೇ ಸೂತರೆಂಬ ಜನರಿದ್ದರು..ಕಾಳಿದಾಸನ ರಘುವಂಶ, ಕಲ್ಹಣನ ರಾಜತರಂಗಿಣಿ ಮುಂತಾದ ಕೃತಿಗಳಿಗೆಲ್ಲ ಈ ವಂಶ ಪ್ರವರಗಳೇ ಆಧಾರವಾಗಿವೆ. ಇದುವರೆಗೆ ಪ್ರಚಲಿತದಲ್ಲಿರುವ ಹಾಗೆ, ಕನ್ಫ್ಯೂಷಿಯಸ್ ಮನೆತನದ ವಂಶಾವಳಿಯ ದಾಖಲೆಯೇ ಅತೀ ಪ್ರಾಚೀನವಾದ ತಲೆಮಾರಿನ ಪಟ್ಟಿ ಎಂದು ಪರಿಗಣಿಸಲಾಗಿದೆ. ಇದರ ಪರಂಪರೆ 2500 ವರ್ಷಗಳಿಂದಲೂ ಎಡೆಬಿಡದೆ ಸಾಗುತ್ತಾ ಬಂದಿದ್ದು, ಗಿನ್ನೆಸ್ ಬುಕ್ಕಿನಲ್ಲಿ ಸ್ಥಾನ ಪಡೆದಿದೆ!

ನಮ್ಮ ಕನ್ನಡನಾಡಿನ ಉತ್ತರ ಭಾಗದ ಕಡೆ ಹೆಳವರು ಎಂಬ ಒಂದು ಜಾತಿಯ ಜನ ಕಂಡುಬರುತ್ತಾರೆ. ಇವರ ಉದ್ಯೋಗ ಬಹುಶಃ ಜಗತ್ತಿನಲ್ಲಿಯೇ ಅತ್ಯಂತ unique ಆದುದು. ಇವರು ಕೆಲವು ನಿರ್ದಿಷ್ಟ ಮನೆತನಗಳ ವಂಶವೃಕ್ಷದ ದಾಖಲಾತಿ ಇಟ್ಟುಕೊಳ್ಳುವ ಕಾಯಕದವರು. ಒಂದು ಮನೆತನದವರು ಮೂಲತಃ ಎಲ್ಲಿಯವರು, ಯಾರ ತಲೆಮಾರಿನಲ್ಲಿ ಯಾವ ಊರಿಗೆ ಬಂದರು, ಅವರಿಗೆ ಎಷ್ಟು ಜನ ಮಕ್ಕಳು? ಅವರ ಅವರೆಲ್ಲಾ ಇರುವ ಜಾಗ ಯಾವುದು? ಉದ್ಯೋಗವೇನು? ಇತ್ಯಾದಿ ಇತ್ಯಾದಿ....ಇದನ್ನೆಲ್ಲಾ ಅವರೊಂದು ಉದ್ದನೆಯ ಹಾಳೆಗಳ ವಿಶೇಷವಾದ ಪುಸ್ತಕದಲ್ಲಿ  ಮಾದರಿಯಲ್ಲಿ ಬರೆದುಕೊಂಡು (ಇವರು ತಮ್ಮ ಪುಸ್ತಕಕ್ಕೆ ಖಾತೆಕಿರ್ದಿ ಎನ್ನುತ್ತಾರೆ) ಇವರ ಪುಸ್ತಕದಲ್ಲಿ ಯಾವ್ಯಾವ ಮನೆತನಗಳ ವಿವರಗಳು ಇವೆಯೋ, ಅವರ ವಂಶದ ಕುಡಿಗಳು ಇರುವ ಎಲ್ಲ ಜಾಗಗಳಿಗೂ ಹೋಗಿ, ಅವರ ಮನೆಯಲ್ಲಿ ಕುಳಿತು, ಅವರೆದುರಿಗೆ ತಮ್ಮ ದಾಖಲಾತಿ ಪುಸ್ತಕದ ವಿವರಗಳನ್ನು "ಹಾಡಿ" ಹೌದು! ಇವರು ಸುದ್ದಿ ಓದುವವರ ಹಾಗೆ ವಿವರಗಳನ್ನು ಓದದೇ, ತಮ್ಮದೇ ಆದ ವಿಶಿಷ್ಟ ಗೇಯದಲ್ಲಿ ಹಾಡುತ್ತಾ ನಿರೂಪಣೆ ಮಾಡುತ್ತಾರೆ. ಎಲ್ಲಾ ಮುಗಿದ ಮೇಲೆ ಮನೆಯ ಯಜಮಾನನಿಂದ ಏನಾದರೂ ಪಡಿ/ಭಕ್ಷೀಸು ಇಸಿದುಕೊಂಡು ಮುಂದಿನ ಮನೆಗೆ ಹೊರಡುತ್ತಾರೆ.
ಸಾಮಾನ್ಯವಾಗಿ ಗಾಢವಾದ ಗುಲಾಬಿ ಬಣ್ಣದ ಶಾಲಿನಲ್ಲಿ ತಮ್ಮ ಕಡತಗಳನ್ನು ಹೊತ್ತುಕೊಂಡು, ತಲೆಗೆ (ಮುಂಡಾಸು ಸುತ್ತಿಕೊಂಡು, ಬಿಜಾಪುರ ಶೈಲಿಯ ಕಚ್ಚೆ ತೊಟ್ಟುಕೊಂಡು ಊರೂರು ಸುತ್ತುವುದನ್ನು ನಾವು ನೋಡಬಹುದು. ನಾನು ಸಣ್ಣವನಿದ್ದಾಗ ಇವರು ಪ್ರತಿ ವರ್ಷವೂ ನಮ್ಮ ಮನೆಗೆ, ನಮ್ಮುರಿನಲ್ಲಿರುವ ಬಂಧುಗಳ ಮನೆಗೆ ಬಂದು ಹೋಗುತ್ತಿದ್ದರು.

ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಹೆಚ್ಚಾಗಿ ನೆಲೆವೂರುವ ಕುಟುಂಬಗಳು ವರ್ಷವಿಡಿ ಹತ್ತಾರು ಜಿಲ್ಲೆಗಳನ್ನು ಸುತ್ತಾಡಿ, ಮಾಹಿತಿ ಕಲೆಹಾಕಿ ವಂಶವೃಕ್ಷ ಓದಿ, ಕುಟುಂಬವು ನೀಡುವ ದಾನ ಸ್ವೀಕಾರ ಮಾಡುತ್ತಾರೆ. ರೋಣ, ಮಲ್ಲಾಪೂರ, ಹಿರೇಮಣ್ಣೂರ, ಚಿಕ್ಕಮಣ್ಣೂರ, ಸವಡಿ, ಬಾಸಲಾಪೂರ, ಮುದೇನಗುಡಿ, ಅರಹುಣಸಿ, ಹುಲ್ಲೂರ, ಕುರಹಟ್ಟಿಯಲ್ಲಿ ಈಗ ಹೆಳವರ ಕುಟುಂಬವು ನೂತನ ದಂಪತಿ ವಿವರ, ಹುಟ್ಟಿದ ಮಕ್ಕಳ ವಿವರ ಸಂಗ್ರಹಿಸುತ್ತಿದ್ದಾರೆ. ಯಾರಾದರೂ ಮೃತಪಟ್ಟರೆ ಅಂಥವರ ಹೆಸರನ್ನು ಕಂಚಿನ ಪತ್ರದಲ್ಲಿ ನಮೂದಿಸುತ್ತಾರೆ. ಇದಲ್ಲದೆ ತವರು ಮನೆ ಸಮಗ್ರ ಮಾಹಿತಿ , ವಿವಾಹದ ದಿನಾಂಕ ಮತ್ತು ವಾರವನ್ನು ಖಾತೆ ಕಿರ್ದಿ ತರಹವಿರುವ ದಾಖಲಾತಿ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ.

*ನ್ಯಾಯಲಯದಲ್ಲಿ ಮಹತ್ವ*- ವಂಶಾವಳಿ ಓದುವ ಮೂಲಕ ಆದಿಕಾಲದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಹೆಳವರ ಸಾಕ್ಷಿಗೆ ನ್ಯಾಯಾಲಯದಲ್ಲಿಯೂ ಮಾನ್ಯತೆ ಇದೆ. ಹಲವು ವ್ಯಾಜ್ಯಗಳಲ್ಲಿ ನ್ಯಾಯಾಲಯಕ್ಕೆ ಗೊಂದಲ ಉಂಟಾದಾಗ ಹೆಳವರು ಕೊಡುವ ತೀರ್ಪು ನ್ಯಾಯಾಲಯದ ತೀರ್ಪನಷ್ಟೆ ಮಹತ್ವ ಪಡೆದಿದೆ ಎನ್ನುತ್ತಾರೆ ಹಿರಿಯರು. ಹೆಳವರ ಸ್ಥಾನ, ಮಾನ, ಗೌರವ ಉಳಿವಿಗಾಗಿ ನಮ್ಮ ಹಿರಿಯರು ಜೀವನವನ್ನೆ ಮುಡುಪಾಗಿಟ್ಟಿದ್ದಾರೆ. ಅದನ್ನೆ ಮುಂದುವರೆಸಿಕೊಂಡು ನಾವು ಹೊರಟಿದ್ದೇವೆ ಎನ್ನುತ್ತಾರೆ ಮುದಕಪ್ಪ ಹೆಳವರ. 
ಮೊದಲಿನಂತೆ ಕೈಬಿಚ್ಚಿ ನೀಡುವವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎನ್ನುವುದು ಹಿರಿಕರ ಮಾತು. ಹೆಳವರು ಕುಟುಂಬದ ವಂಶವೃಕ್ಷಕ್ಕಾಗಿ ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ ಎನ್ನುವ ಕೆಲವರು ಕೈಬಿಚ್ಚಿ ನೀಡಿ, ಅವರನ್ನು ಸಂತೃಪ್ತ ಪಡಿಸುತ್ತಾರೆ. 
ಕೊಲಾರಿಯಲ್ಲಿ ಪಯಣ : ಅಲೆಮಾರಿಗಳಂತೆ ರಾಜ್ಯ ಸುತ್ತುವ ಹೆಳವರು ಎತ್ತಿನ ಬಂಡಿಗೆ ಕೊಲ್ಹಾರಿ (ಮೆಲ್ ಹೊದಿಕೆ)ಯನ್ನು ಸಿದ್ಧಪಡಿಸಿಕೊಂಡು ಹೊರಡುತ್ತಾರೆ. ಇದು ಗುಡಿಸಲುಗಳು ಇರುವ ಮಾದರಿಯಲ್ಲೇ ಇರುತ್ತದೆ. ಇದರಲ್ಲಿ ನಿತ್ಯ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿ ಇರುತ್ತದೆ. ಪಯಣದ ನಡುವೆ ಬರುವ ಕುಟುಂಬಗಳ ಯೋಗಕ್ಷೇಮ ವಿಚಾರಿಸುತ್ತಾ ಸಾಗುತ್ತಾರೆ.
ಕಾಡುತ್ತಿರುವ ಅನಕ್ಷರತೆಃವರ್ಷವಿಡಿ ಊರೂರು ಅಲೆಯುವ ಹೆಳವರಲ್ಲಿ ಪ್ರೌಢಮಟ್ಟದ ಹಾಗೂ ಕಾಲೇಜು ಮೆಟ್ಟಿಲು ಹತ್ತುವವರ ಸಂಖ್ಯೆ ಕಡಿಮೆಯಾಗಿದೆ. ಓದಲು,ಬರೆಯಲು ಬರುವವರೆಗೆ ಮಾತ್ರ ಶಿಕ್ಷಣ ಪಡೆಯುವ ಇವರು ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುತ್ತಿಲ್ಲ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಇಂದಿಗೂ ಶಿಕ್ಷಣ ಎನ್ನುವುದು ಕನಸಾಗಿದೆ.
*ವಿಷಕಾರಿ ಜಂತು*- ಖಾಲಿ ಜಾಗದಲ್ಲಿ ಬಿಡಾರ ಹೂಡುವ ಇವರಲ್ಲಿ ಹಲವರಿಗೆ ವಿಷಕಾರಿ ಜಂತು ಕಚ್ಚಿ ಪ್ರಾಣಾಪಾಯಗಳು ಸಂಭವಿಸಿವೆ. ಆದರೂ ತಲೆಮಾರುಗಳಿಂದ  ಬಂದ ಕೆಲಸವನ್ನು ಬೀಡಲು ಆಗುವುದಿಲ್ಲ ಎನ್ನುತ್ತಾರೆ ರಾಮಣ್ಣ.

*ದಾಖಲೆಗಳ ಸಂರಕ್ಷಣೆ*- ಅಲೆಮಾರಿಗಳಾಗಿರುವ ಹೆಳವರು ಒಂದೇ ನಿಮಿಷದಲ್ಲಿ  ನೂರಾರು ವರ್ಷಗಳ ಹಿಂದಿನ ಕಾಲಕ್ಕೆ ಕರೆದೊಯ್ದು ನಮ್ಮ ಪೂರ್ವಜರ ಇತಿಹಾಸ ಹೇಳುತ್ತಾರೆ. 300 ರಿಂದ 350 ವರ್ಷಗಳಿಂದ ಬರೆಯುತ್ತಾ ಬಂದಿರುವ ಖಾತೆಕಿರ್ದಿ (ಪುಸ್ತಕ) ಆಧಾರಸ್ತಂಬ. ಹೆಳವರ ಸಮುದಾಯದವರು ಬಹತೇಕರು
ಶೈಕ್ಷಣಿಕ ಅಭಿವೃದ್ಧಿ ಜೊತೆ ವಿವಿದ  ಕ್ಷೇತ್ರಗಳಲ್ಲಿ ಸಾಕಷ್ಟು ಹಿಡಿತಸಾಧಿಸಿದ್ದಾರೆ, ಸ್ವಾವಲಂಬಿ ಜೀವನಕ್ಕೆ ಅಡಿಪಾಯ ಹಾಕಿರುವ ಹಿನ್ನಲೆಯಲ್ಲಿ ಹೆಳವರ ಬದುಕು ಹಸನಾಗುವತ್ತ ಸಾಗಿದೆ.

ವಿ.ಜಿ.ವೃಷಭೇಂದ್ರ 

0 Response to "ವಂಶ ವೃಕ್ಷದ ಸ್ವರೂಪವೇ ಹೆಳವರು-Special"

Post a Comment

Article Top Ads

Central Ads Article 1

Middle Ads Article 2

Article Bottom Ads