
ಅತಿವೃಷ್ಟಿಯಿಂದ ಹಾನಿಗೊಳಗಾದ ಕೆರೆಗಳ ತ್ವರಿತ ದುರಸ್ತಿ - ಸಚಿವ ಜೆ.ಸಿ.ಮಾಧುಸ್ವಾಮಿ-Dharwad
Tuesday, September 7, 2021
Comment
ಅತಿವೃಷ್ಟಿಯಿಂದ ಹಾನಿಗೊಳಗಾದ ಕೆರೆಗಳ ತ್ವರಿತ ದುರಸ್ತಿ - ಸಚಿವ ಜೆ.ಸಿ.ಮಾಧುಸ್ವಾಮಿ
ಧಾರವಾಡ ಸೆ.07:
ಅತಿವೃಷ್ಟಿಯಿಂದ ಹಾನಿಗೊಳಗಾದ ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಕೆರೆ ,ಏತನೀರಾವರಿ ಮತ್ತಿತರ ಪ್ರದೇಶಗಳಿಗೆ ಇಂದು ಭೇಟಿ ನೀಡಿ,ಪರಿಶೀಲಿಸಲಾಗಿದೆ ಆದಷ್ಟು ಬೇಗ ಅವುಗಳನ್ನು ದುರಸ್ತಿಪಡಿಸಲಾಗುವುದು ಎಂದು ಕಾನೂನು,ಸಂಸದೀಯ ವ್ಯವಹಾರ,ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಅಳ್ನಾವರ ತಾಲೂಕಿನ ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ಒಡೆದ ಪ್ರದೇಶಕ್ಕೆ ಭೇಟಿ ನೀಡಿದ ಅವರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇಂದು ಇಡೀ ದಿನ ಉತ್ತರ ಕನ್ನಡ ಜಿಲ್ಲೆಯ ಹೋಟೆಗಾಳಿ ಕೆರೆ,ಹೊನ್ನಳ್ಳಿ ಹಾಗೂ ಗುಳ್ಳಾಪುರ ಏತ ನೀರಾವರಿ ಯೋಜನೆಗಳು, ಯಡೋಗಾ ,ಮಂಗಳವಾಡಾ ಬಾಂದಾರಗಳು ಹಾಗೂ ಧಾರವಾಡ ಜಿಲ್ಲೆಯ ಹೂಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ಹಾನಿಯನ್ನು ವೀಕ್ಷಿಸಿದ್ದೇನೆ.ಆದಷ್ಟು ಬೇಗ ದುರಸ್ತಿಪಡಿಸಲಾಗುವುದು.ಸ್ಥಳೀಯ ಶಾಸಕರು ಹಾಗೂ ತಜ್ಞರ ಸಲಹೆಗಳನ್ನೂ ಕೂಡ ಪಡೆಯಲಾಗುವುದು.
2019 ರಲ್ಲಿ ನಡೆದಿದೆ ಎನ್ನಲಾದ ಕೆಲವು ಕಾಮಗಾರಿಗಳ ಬಿಲ್ಗಳ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು,
ಐಐಎಸ್ಸಿ ಅಥವಾ ಇಂಜಿನಿಯರಿಂಗ್ ಕಾಲೇಜುಗಳ ತಂಡದಿಂದ ಮೂರನೇ ಪಾರ್ಟಿ ಪರಿಶೀಲನೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾದಾಯಿ -ಕಳಸಾ ಬಂಡೂರಿ ಯೋಜನೆಯು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಯೋಜನೆಗಾಗಿ ಹೋರಾಡಿದ ಬಸವರಾಜ ಬೊಮ್ಮಾಯಿ ಅವರೇ ಈಗ ಮುಖ್ಯಮಂತ್ರಿಯಾಗಿದ್ದಾರೆ, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರಿಗೂ ಯೋಜನೆಯ ಸಂಪೂರ್ಣ ಮಾಹಿತಿ ಇದೆ.ನ್ಯಾಯಾಧೀಕರಣದ ಮುಂದೆ ಗೋವಾ ರಾಜ್ಯ ಸಲ್ಲಿಸಿರುವ ಆಕ್ಷೇಪಣೆ ಇತ್ಯರ್ಥವಾದ ಕೂಡಲೇ ಕಾಮಗಾರಿ ಪ್ರಾರಂಭಿಸಿ,ಯೋಜನೆಗೆ ಅಗತ್ಯವಿರುವ ಹಣಕಾಸು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.
ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಇಂದಿರಮ್ಮನ ಕೆರೆ ದುರಸ್ತಿಗೆ 9.4 ಕೋಟಿ ರೂ.ಅಂದಾಜು ಪ್ರಸ್ತಾವನೆಗೆ ಸಣ್ಣ ನೀರಾವರಿ ಇಲಾಖೆ ಪ್ರಾಥಮಿಕ ಒಪ್ಪಿಗೆ ನೀಡಿದೆ,ತಾಂತ್ರಿಕ ಅನುಮೋದನೆ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ವಿನಾಯಕ ಮತ್ತಿತರರು ಇದ್ದರು.
0 Response to "ಅತಿವೃಷ್ಟಿಯಿಂದ ಹಾನಿಗೊಳಗಾದ ಕೆರೆಗಳ ತ್ವರಿತ ದುರಸ್ತಿ - ಸಚಿವ ಜೆ.ಸಿ.ಮಾಧುಸ್ವಾಮಿ-Dharwad"
Post a Comment