-->
ಅರಣ್ಯ ಕಡಿದು ಹೊಸತರ ಸೃಷ್ಟಿಗೆ ಸುರೀತಾರೆ 60 ಲಕ್ಷ !-Mangalore

ಅರಣ್ಯ ಕಡಿದು ಹೊಸತರ ಸೃಷ್ಟಿಗೆ ಸುರೀತಾರೆ 60 ಲಕ್ಷ !-Mangalore

*ಏಕೈಕ ರಕ್ಷಿತಾರಣ್ಯ ಕಡಿಯಲು ಇನ್ನೊಂದೇ ಮೆಟ್ಟಿಲು ; ಲೋಬೋ ಹೂಡಿದ್ದ ವಸತಿ ಯೋಜನೆಗೆ ಬಿಜೆಪಿ ಥಂಡಾ ! ಅರಣ್ಯ ಕಡಿದು ಹೊಸತರ ಸೃಷ್ಟಿಗೆ ಸುರೀತಾರೆ 60 ಲಕ್ಷ !*


 *ಹಸಿರ ಸಿರಿಯಂತಿರುವ ಅರಣ್ಯವನ್ನು ಕಡಿದು ಅಲ್ಲೊಂದು ದೊಡ್ಡ ವಸತಿ ಸಂಕೀರ್ಣ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ರೆಡಿಯಾಗಿದೆ.* 

 ಮಂಗಳೂರು
 ಅಲ್ಲಿ ಹೋಗಿ ನೋಡಿದರೆ, ನೂರಿನ್ನೂರು ವರ್ಷಗಳ ಹಳೆಯ ಬೃಹದ್ ಗಾತ್ರದ ಮರಗಳಿವೆ. ಬಾನೆತ್ತರಕ್ಕೆ ಚಾಚಿಕೊಂಡು ಬೆಳೆದಿರುವ ಮರಗಳಾಗಿದ್ದು, ಯಾವುದೇ ಮಳೆ, ಗಾಳಿಗೂ ಅಲುಗಾಡದಂತೆ ರಕ್ಕಸ ಗಾತ್ರದಲ್ಲಿ ಎದ್ದು ನಿಂತಿದೆ. ಆದರೆ, ಅಲ್ಲಿನ ಮುನ್ನೂರ ಐವತ್ತಕ್ಕೂ ಹೆಚ್ಚು ಇರುವ ಮರಗಳಿಗೆ ಇನ್ನು ಆರು ತಿಂಗಳಷ್ಟೇ ಆಯುಷ್ಯ ಇರೋದು. ಈಗಾಗ್ಲೇ ಅರಣ್ಯ ಇಲಾಖೆಯವರು ಕಡಿಯಲು ಗುರುತು ಹಾಕಿದ್ದಾರೆ. ಹೌದು.. ಹಸಿರ ಸಿರಿಯಂತಿರುವ ಅರಣ್ಯವನ್ನು ಕಡಿದು ಅಲ್ಲೊಂದು ದೊಡ್ಡ ವಸತಿ ಸಂಕೀರ್ಣ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಆಡಳಿತ ರೆಡಿಯಾಗಿದೆ.

ಶಕ್ತಿನಗರದಲ್ಲೊಂದು ವಸತಿ ಸಂಕೀರ್ಣ ಬರಲಿದೆ, ಸುಮಾರು 900ಕ್ಕೂ ಹೆಚ್ಚು ಜನರಿಗೆ ವಸತಿ ಸಿಗಲಿದೆ ಅನ್ನೋದು ಕಳೆದ ಏಳೆಂಟು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಮಂಗಳೂರಿನಲ್ಲಿ ಜೆ.ಆರ್.ಲೋಬೋ ಶಾಸಕರಿದ್ದಾಗ, ಬಡವರಿಗೆ ಉಚಿತ ಮನೆ ನಿರ್ಮಿಸಿಕೊಡಲೆಂದು ಮಾಡಿದ್ದ ಮಹತ್ವಾಕಾಂಕ್ಷಿ ಯೋಜನೆಯದು. ಹೆಸರು ಶಕ್ತಿನಗರ ಎಂದಿದ್ದರೂ, ಅದು ಶಕ್ತಿನಗರವಲ್ಲ. ಕೋರ್ಡೆಲ್ ಚರ್ಚ್ ಬಳಿಯೂ ಅಲ್ಲ. ಶಕ್ತಿನಗರ ಜಂಕ್ಷನ್ನಿಂದ ಮೂರು ಕಿಮೀ ಹಾಗೂ ಕೋರ್ಡೆಲ್ ಚರ್ಚ್ ಬಳಿಯಿಂದ ಐದು ಕಿಮೀ ದೂರದಲ್ಲಿರುವ ರಾಜೀವ ನಗರ ಎಂಬಲ್ಲಿನ ಕೋರ್ಡೆಲ್ ಗುಡ್ಡದ ರಕ್ಷಿತಾರಣ್ಯದ ಜಾಗವನ್ನು ವಸತಿ ಸಂಕೀರ್ಣಕ್ಕಾಗಿ ಗುರಿತಿಸಲಾಗಿತ್ತು. ಈಗ ಇರುವ ಕೋರ್ಡೆಲ್ ಚರ್ಚ್ 200 ವರ್ಷಗಳ ಹಿಂದೆ ಮೊದಲು ಸ್ಥಾಪನೆಯಾಗಿದ್ದು ಇದೇ ಕೋರ್ಡೆಲ್ ಗುಡ್ಡದಲ್ಲಂತೆ. ಆನಂತರ  ಜನವಸತಿ ಇರದ ಕುಗ್ರಾಮದಲ್ಲಿ ಬೇಡವೆಂದು ಇಲ್ಲಿದ್ದ ಪ್ರತಿಮೆಯನ್ನು ಹೈವೇ ಬಳಿಗೆ ಒಯ್ದು ಚರ್ಚ್ ಮಾಡಲಾಗಿತ್ತು.
ಕೋರ್ಡೆಲ್ ಗುಡ್ಡ ಎಂಬ ಹೆಸರು 250 ವರ್ಷಗಳ ಹಿಂದಿನಿಂದಲೂ ಅಲ್ಲಿ ನಿವಾಸಿಗಳಾಗಿರುವ ಕ್ರಿಸ್ತಿಯನ್ ಕುಟುಂಬಸ್ಥರ ರೆಕಾರ್ಡಿನಲ್ಲಿದೆ. ಹೆಸರಿಗೆ ತಕ್ಕಂತೆ, ಅಲ್ಲಿ ಗುಡ್ಡದ ಆಕೃತಿಯಲ್ಲಿ ಬೆಳೆದು ನಿಂತ ಬೃಹದಾಕಾರದ ಮರಗಳಿವೆ. ಮಂಗಳೂರಿನ ಮಟ್ಟಿಗೆ ಆ ರೀತಿಯ ಮರಗಳು ಬೇರೆ ಕಡೆ ಇಲ್ಲ. ಆದರೆ, ವಸತಿ ಸಂಕೀರ್ಣ ನಿರ್ಮಾಣಕ್ಕಾಗಿ ಈ ಭಾಗದ ಒಂಬತ್ತು ಎಕ್ರೆ ಅರಣ್ಯ ಜಾಗವನ್ನು ನೋಟಿಫೈ ಮಾಡಲಾಗಿದ್ದು, ಲೋಬೋ ಶಾಸಕರಿದ್ದಾಗ ನೂರಾರು ಮಂದಿಗೆ ಅದರ ಹೆಸರಲ್ಲಿ ಹಕ್ಕುಪತ್ರ ಕೊಟ್ಟು ಮುಂಗೈಗೆ ಬೆಲ್ಲ ಹಚ್ಚಿ ನೆಕ್ಕಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಇಲ್ಲಿ ಪ್ರಶ್ನೆ ಇರುವುದು ಮಂಗಳೂರು ನಗರ ಮಧ್ಯದಲ್ಲಿರುವ ಏಕೈಕ ರಕ್ಷಿತಾರಣ್ಯವನ್ನೇ ಕಡಿದು ವಸತಿ ಸಂಕೀರ್ಣ ಮಾಡಬೇಕೇ ಎನ್ನೋದು.

ಮೂಲತಃ ರಕ್ಷಿತಾರಣ್ಯ ಪ್ರದೇಶ ಆಗಿದ್ದರೂ, ಅಲ್ಲಿ ಸಮೃದ್ಧ ಅರಣ್ಯ ಇದ್ದರೂ ಅದನ್ನೇ ವಸತಿ ಸಂಕೀರ್ಣ ನಿರ್ಮಾಣಕ್ಕೆ ಗುರುತಿಸಿದ್ದು ನಮ್ಮ ಆಡಳಿತಗಾರರು ಮಾಡಿದ್ದ ದೊಡ್ಡ ತಪ್ಪು. ಜೆ.ಆರ್.ಲೋಬೋ ಈ ಹಿಂದೆ ಮಂಗಳೂರಿನಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ಕಾರಣದಿಂದಲೋ ಏನೋ ಮಂಗಳೂರಿನ ಏಕೈಕ ಅರಣ್ಯ ಜಾಗವನ್ನು ಪತ್ತೆಮಾಡಿ ಅಲ್ಲಿಯೇ ವಸತಿ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ಹಾಕಿದ್ದರು ಎನ್ನಲಾಗುತ್ತಿದೆ. ಆದರೆ, ರಕ್ಷಿತಾರಣ್ಯ ಆಗಿದ್ದರಿಂದ ಅದನ್ನು ಸುಲಭದಲ್ಲಿ ನೋಟಿಫೈ ಮಾಡಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೂ, ಲೋಬೋ ಶಾಸಕರಾಗಿದ್ದಾಗಲೇ ಅಲ್ಲಿನ ನಾಲ್ಕು ಎಕರೆ ವ್ಯಾಪ್ತಿಯಲ್ಲಿದ್ದ ನೂರಾರು ಮರಗಳನ್ನು ಕಡಿದು ಒಯ್ಯಲಾಗಿತ್ತು ಅನ್ನೋದನ್ನು ಸ್ಥಳೀಯರು ಹೇಳುತ್ತಾರೆ. ಟನ್ ಗಟ್ಟಲೆ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದ್ದ ಖಾಸಗಿ ವ್ಯಕ್ತಿಯ ವಿರುದ್ಧ ಆನಂತರ ಎಫ್ಐಆರ್ ಕೂಡ ದಾಖಲಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಅಲ್ಲಿ ಪ್ರತಿಭಟನೆ ನಡೆಸಿ, ವಸತಿ ಸಂಕೀರ್ಣದ ವಿರುದ್ಧವೂ ಆಕ್ಷೇಪಿಸಿದ್ದರು. ಹೀಗಾಗಿ ಎಲ್ಲವೂ ಅಲ್ಲಿಗೇ ಪೆಂಡಿಂಗ್ ಆಗಿತ್ತು.

ಆನಂತರದಲ್ಲಿ ಲೋಬೋ ಇದ್ದ ಸ್ಥಾನಕ್ಕೆ ಬಿಜೆಪಿಯ ವೇದವ್ಯಾಸ ಕಾಮತ್ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅರಣ್ಯ ಜಾಗದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಏನೇನು ಆಗಬೇಕೋ ಅದನ್ನು ಮಾಡಿದ್ದಾರೆ. ರಕ್ಷಿತಾರಣ್ಯ ಆಗಿದ್ದರಿಂದ ಅಲ್ಲಿನ ಮರಗಳನ್ನು ಕಡಿಯುವಂತಿಲ್ಲ. ಇನ್ನಾವುದೇ ಯೋಜನೆಗೂ ಬಳಸುವಂತೆಯೂ ಇಲ್ಲ. ಜಿಲ್ಲಾಧಿಕಾರಿಯ ವಿವೇಚನೆಯಲ್ಲಿ ಅರಣ್ಯ ಭೂಮಿಯನ್ನು ಮಾರ್ಪಡಿಸುವುದಕ್ಕೂ ಸಾಧ್ಯವಾಗಲ್ಲ. ಆದರೆ, ಲೋಬೋ ನೂರಾರು ಮಂದಿಗೆ ಹಕ್ಕುಪತ್ರ ಕೊಟ್ಟಿದ್ದರಿಂದ ಈ ವಿಚಾರ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕರು ಹಕ್ಕುಪತ್ರ ಕೊಟ್ಟಿದ್ದರೆ, ಬಿಜೆಪಿಯವರು ಬಂದು ಏನೂ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ವೇದವ್ಯಾಸ ಕಾಮತ್ ಏನಾದ್ರೂ ಮಾಡಲೇಬೇಕಿತ್ತು.

ಹೀಗಾಗಿ ಅರಣ್ಯ ಇಲಾಖೆಗೆ ಶಕ್ತಿನಗರದ ಬದಲಿಗೆ ಎಡಪದವು ಬಳಿ ಇಪ್ಪತ್ತು ಎಕರೆ ಕಂದಾಯ ಭೂಮಿಯನ್ನು ಕೊಡಿಸಿ, ಅಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲು ಈಗಿನ ಶಾಸಕರು ಯೋಜನೆ ಹಾಕಿದ್ದಾರೆ. ಒಂದು ಕಡೆಯ ಅರಣ್ಯ, ಅಲ್ಲಿರುವ ಬೃಹದಾಕಾರದ ಮರಗಳನ್ನು ಕಡಿದು ಇನ್ನೊಂದು ಕಡೆ ಅರಣ್ಯ ಬೆಳೆಸುತ್ತೇವೆ ಅನ್ನುವುದೇ ಬೋಗಸ್. ಹಾಗಿದ್ದರೂ, ಮಹಾನಗರ ಪಾಲಿಕೆಯಿಂದ 60 ಲಕ್ಷ ಸುರಿದು ಎಡಪದವಿನಲ್ಲಿ ಎರಡು ಪಟ್ಟು ಬದಲೀ ಅರಣ್ಯ ಬೆಳೆಸುವುದಾಗಿ ಹೇಳುತ್ತಿದ್ದಾರೆ. ಒಂದು ಗಿಡ ನೆಟ್ಟು ಸಾಧಾರಣ ಮರ ಆಗಬೇಕಿದ್ದಲ್ಲಿ ಕನಿಷ್ಠ ಮೂವತ್ತು ವರ್ಷ ಬೇಕು ಅನ್ನೋದು ಗೊತ್ತಿದ್ದರೂ, ನಮ್ಮ ಆಡಳಿತಗಾರರು ಇರುವ ಅರಣ್ಯವನ್ನೇ ಕಡಿದು ಅರಣ್ಯ ಸೃಷ್ಟಿಯ ಹೊಸ ನಾಟಕ ಹೆಣೆಯುತ್ತಿದ್ದಾರೆ.


ಈ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರ ಬಳಿ ಕೇಳಿದರೆ, ಮರಗಳನ್ನು ಕಡಿಯಬಾರದು ಅನ್ನೋ ಕಾಳಜಿ ನಂಗೂ ಇದೆ. ಆದರೆ, ಐದಾರು ವರ್ಷಗಳ ಹಿಂದೆಯೇ ಈ ಬಗ್ಗೆ ಪ್ರಪೋಸಲ್ ಆಗಿದೆ. 930 ಜನರಿಗೆ ಹಕ್ಕುಪತ್ರ ಕೊಟ್ಟಿದ್ದಾರೆ. ಈಗ ಅಲ್ಲಿನ ಅರಣ್ಯದ ಬದಲಿಗೆ ಪ್ರತ್ಯೇಕ ಅರಣ್ಯ ಸೃಷ್ಟಿಗೆ ಯೋಜನೆ ಹಾಕಲಾಗಿದೆ. ಪರಿಸರ ಕ್ಲಿಯರೆನ್ಸ್ ಸಿಕ್ಕಿದ ಕೂಡಲೇ ವಸತಿ ಸಂಕೀರ್ಣ ಕೆಲಸ ಆರಂಭ ಆಗಲಿದೆ. ನಾವು ಏನೂ ಮಾಡೋಕ್ಕಾಗುವುದಿಲ್ಲ. ಒಂದ್ವೇಳೆ ಒಂಬತ್ತು ಎಕರೆ ಜಾಗ ಮಂಗಳೂರು ಸಿಟಿ ವ್ಯಾಪ್ತಿಯಲ್ಲಿ ಎಲ್ಲೇ ಆದ್ರೂ ಬೇರೆ ಕಡೆ ಇದ್ದರೆ ಅಲ್ಲಿ ಮಾಡಬಹುದು, ಎಲ್ಲಾದ್ರೂ ಇದ್ದರೆ ತೋರಿಸಿ ಎಂದಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಬಳಿ ಕೇಳಿದಾಗಲೂ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಶಾಸಕರು ಆ ಜಾಗವನ್ನು ಗುರುತಿಸಿ ಹಕ್ಕುಪತ್ರ ಕೊಟ್ಟಿದ್ದಾರೆ. ಈಗ ನನ್ನ ಮನೆಗೆ ಬಂದು ಜನರು ಕೇಳುತ್ತಿದ್ದಾರೆ. ಹಿಡಿಶಾಪ ಹಾಕುತ್ತಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬದಲೀ ಜಾಗ ಎಲ್ಲಿಯೂ ಇಲ್ಲ. ಮರಗಳ ಬಗ್ಗೆ ಖಂಡಿತ ಕಾಳಜಿ ಇದೆ. ಅದಕ್ಕಾಗಿ ಹೊಸತಾಗಿ ನಾವು ಅರಣ್ಯ ಸೃಷ್ಟಿಸುತ್ತಿದ್ದೇವೆ. ತುಂಬ ಕಷ್ಟಪಟ್ಟು ಅರಣ್ಯ ಜಾಗದ ಕ್ಲಿಯರೆನ್ಸ್ ಪಡೆಯುತ್ತಿದ್ದೇವೆ. ಮೂರ್ನಾಲ್ಕು ತಿಂಗಳಲ್ಲಿ ಫೈನಲ್ ಆಗಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಅರಣ್ಯವನ್ನು ಕಡಿದು ಅಲ್ಲೊಂದು ಕಾಂಕ್ರೀಟ್ ಕಾಡು ನಿರ್ಮಿಸಲು ಅಧಿಕಾರಸ್ಥರು ರೆಡಿಯಾಗಿದ್ದಾರೆ. ಸ್ಥಳೀಯರು ವಿಳಂಬವಾಗಿ ಎಚ್ಚತ್ತುಕೊಂಡು ನೂರಾರು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಕಾಡನ್ನು ಉಳಿಸಿ ಎಂದು ಅಂಗಲಾಚುತ್ತಿದ್ದಾರೆ. ಲೋಬೋ ದೂರಗಾಮಿ ಯೋಚನೆಯಲ್ಲಿ ಇಟ್ಟಿದ್ದ ರಾಜಕೀಯ ನಡೆಗೆ ಈ ಹಿಂದೆ ಪ್ರತಿಭಟನೆ ನಡೆಸಿದ್ದ ಬಿಜೆಪಿಯವರು ಕೂಡ ತಲೆ ಅಲ್ಲಾಡಿಸುವಂತಾಗಿದೆ.

1 Response to "ಅರಣ್ಯ ಕಡಿದು ಹೊಸತರ ಸೃಷ್ಟಿಗೆ ಸುರೀತಾರೆ 60 ಲಕ್ಷ !-Mangalore"

  1. Mysuru Casino - The HERZAMMAN
    Mysuru Casino - The Home of the deccasino Best of the Slots! Visit us to 1xbet 먹튀 Play the best slots and 바카라 사이트 enjoy the best table games in our aprcasino casino. Visit casinosites.one us

    ReplyDelete

Article Top Ads

Central Ads Article 1

Middle Ads Article 2

Article Bottom Ads