-->
“ಅಂದು-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ಇಂದು-ಉದ್ಯೋಗ ಕೊಡದ ಆಳ್ವಿಕರೇ ಅಧಿಕಾರ ಬಿಟ್ಟು ತೊಲಗಿ”-Dharwad

“ಅಂದು-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ಇಂದು-ಉದ್ಯೋಗ ಕೊಡದ ಆಳ್ವಿಕರೇ ಅಧಿಕಾರ ಬಿಟ್ಟು ತೊಲಗಿ”-Dharwad


“ಅಂದು-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ಇಂದು-ಉದ್ಯೋಗ ಕೊಡದ ಆಳ್ವಿಕರೇ ಅಧಿಕಾರ ಬಿಟ್ಟು ತೊಲಗಿ”
ನಿರುದ್ಯೋಗಿ ಯುವಜನರ ‘ಅಖಿಲ ಭಾರತ ಬೇಡಿಕೆ ದಿನ’
 ಕ್ವಿಟ್ ಇಂಡಿಯಾ ಚಳುವಳಿಯ ವಾರ್ಷಿಕ ದಿನದ ಸಂದರ್ಭದಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯಿಂದ(AIUYSC) ಉದ್ಯೋಗಕ್ಕಾಗಿ ಆಗ್ರಹಿಸಿ ಅಖಿಲ ಭಾರತ ಬೇಡಿಕೆ ದಿನದ ಅಂಗವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯದ ಆರ್ಥಿಕ ಪರಿಸ್ಥಿತಿ ದಿನೇದಿನೇ ಅಧಃಪತನದತ್ತ ಸಾಗಿದೆ. ೨೦೧೮-೧೯ರ ಸಾಲಿನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾವಿರಾರು ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲಕಚ್ಚಿವೆ. ಪತ್ರಿಕೆಗಳಲ್ಲಿ ವರದಿಯಾದಂತೆ ಬೆಂಗಳೂರಿನ ಪೀಣ್ಯ ಕೈಗಾರಿಕಾವಲಯ ಒಂದರಲ್ಲೆ ೧೨ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾದರು. ಕೋವಿಡ್-೧೯ ಸಂದರ್ಭದಲ್ಲಿ ದಿಢೀರನೆ ಹೇರಲಾದ ಲಾಕ್ಡೌನ್‌ನಿಂದಾಗಿ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡರು. ಈ ಸಂದರ್ಭದಲ್ಲಿ ದಿನಗೂಲಿ ನೌಕರರು, ವಲಸೆ ಕಾರ್ಮಿಕರು, ಹಮಾಲಿಗಳು, ಫ್ಯಾಕ್ಟರಿ-ಕಂಪನಿಗಳಲ್ಲಿ ಕೆಲಸ ಮಾಡುವವರು, ಸರ್ಕಾರಿ ಇಲಾಖೆಗಳಲ್ಲಿನ ಗುತ್ತಿಗೆ-ಹೊರಗುತ್ತಿಗೆ ನೌಕರರು, ಅತಿಥಿ ಉಪನ್ಯಾಸಕರು-ಶಿಕ್ಷಕರು-ಇವರ ಜೀವನವನ್ನು ಇನ್ನಷ್ಟು ಅತಂತ್ರ ಸ್ಥಿತಿಗೆ ತಳ್ಳಿತ್ತು. ಉದ್ಯೋಗವಿಲ್ಲದೆ ಒಂದು ದಿನದ ಊಟಕ್ಕೆ ಗತಿ ಇಲ್ಲದಂತೆ ಸತ್ತ ಜನರೆಷ್ಟೋ?! ಮನನೊಂದು ಆತ್ಮಹತ್ಯೆ ಮಾಡಿಕೊಂಡವರು ಎಷ್ಟೋ?! ವಲಸೆ ಕಾರ್ಮಿಕರು ಮರಳಿ ತಮ್ಮ ಊರಿಗೆ ಕಾಲ್ನಡಿಗೆಯಲ್ಲೇ ನಡೆಯುವಾಗ ದಾರಿ ಮಧ್ಯೆ ಸತ್ತವರೆಷ್ಟೋ. 
ಈ ವಿಷಯಗಳಿಗೆ ಸಂಬಧಪಟ್ಟಂತೆ ಸರ್ಕಾರಗಳಲ್ಲಿ ಯಾವುದೇ ನಿಖರವಾದ ಮಾಹಿತಿ ಇಲ್ಲ. ನಂತರ ಬಂದ ಎರಡನೇ ಅಲೆ ಇದ್ದಬದ್ದ ಬದುಕುವ ಆಸೆಯನ್ನು ಚಿವುಟಿಹಾಕಿತು. ಇದು ಸಾಲದೆಂಬAತೆ ಸರ್ಕಾರಗಳ ಆರ್ಥಿಕ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆಏರಿಕೆ ಜನಜೀವನವನ್ನು ಹೈರಾಣಾಗಿಸಿದೆ. ಇಡೀ ದೇಶದಲ್ಲಿ ನಿರುದ್ಯೋಗದಿಂದಾಗಿ ಬೇಸತ್ತು ಖಿನ್ನತೆಗೆ ಒಳಗಾಗಿ ಸಾಯುವವರ ಪಟ್ಟಿಯಲ್ಲಿ ಕರ್ನಾಟಕಕ್ಕೆ ಮೊದಲನೇ ಸ್ಥಾನ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ೩ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ. ಖಾಲಿ ಆಗುತ್ತಲೇ ಇವೆ. ಶಿಕ್ಷಣ, ಆರೋಗ್ಯ, ವಸತಿ, ಇಂಧನ ಸೇರಿದಂತೆ ಮೂಲಭೂತ ವಲಯಗಳಲ್ಲಿ ಅವಶ್ಯಕ ಸಂಖ್ಯೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಎಲ್ಲಾ ಇಲಾಖೇಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ ಮಾಡದೇ, ದಿನಗೂಲಿ, ಗುತ್ತಿಗೆ, ಅರೆ-ಗುತ್ತಿಗೆ, ಅತಿಥಿ ಮುಂತಾದ ಹೆಸರಿನಲ್ಲಿ ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ. ೨೦೧೬ ರಿಂದ ೨೦೨೧ರವರೆಗೂ ರಾಜ್ಯದ ವಿವಿಧ ಇಲಾಖೆಯಲ್ಲಿ ನೇಮಕಾತಿಗಾಗಿ ಸುಮಾರು ೧೯ ಭಾರಿ ಅಧಿಸೂಚನೆ ಹೊರಬಿದ್ದು ಇದುವರೆಗೂ ಯಾರಿಗೂ ಆರ್ಡರ್ ಕಾಪಿ ಕೈಗೆ ಸಿಕ್ಕಿ ಕೆಲಸಕ್ಕೆ ಸೇರಿಲ್ಲ. 
ಆರೋಗ್ಯ ಕ್ಷೇತ್ರದಲ್ಲಿ ಬಿಎಸ್ಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಫಾರ್ಮಸಿ, ಕೋರ್ಸ್ ಮುಗಿಸಿ, ಗುತ್ತಿಗೆ ಹೊರಗುತ್ತಿಗೆ ಆಧಾರದಲ್ಲಿ ಪುಡಿಗಾಸಿಗೆ ದುಡಿಯುತ್ತಿದ್ದಾರೆ. ಕೊರೋನ ಅವಧಿಯಲ್ಲಂತೂ ಇವರು ಜೀವಪಣಕ್ಕಿಟ್ಟು ದುಡಿದಿದ್ದಾರೆ. ಇವರ ಸೇವೆಯು ಯಾವ ಕಾರಣಕ್ಕೂ ಮರೆಯುವಂತದ್ದಲ್ಲ. ಹೃದಯಹೀನ ಸರ್ಕಾರ ಕೊರೋನ ನಂತರ ಅವರನ್ನು ಕೆಲಸದಿಂದ ಕೈ ಬಿಡುತ್ತಿದೆ. ಇನ್ನು ಅತಿಥಿ ಉಪನ್ಯಾಸಕರದ್ದು ಮಾಸ್ಟರ್ ಡಿಗ್ರಿ, PhD, M.Phil ಓದಿ ೧೧ರಿಂದ೧೩ ಸಾವಿರಕ್ಕೆ ದುಡಿಯುವ ಹೀನಾಯ ಪರಿಸ್ಥಿತಿ. ಉದ್ಯೋಗದ ಭದ್ರತೆ ಇಲ್ಲ. ದುಡಿದ ಸಂಬಳ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಜೀವನ ಸರಿದೂಗಿಸಲು ಆ ಕೆಲಸದ ಜೊತೆಗೆ ಯಾವ್ಯಾವುದೋ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಅತಿಥಿದೇವೋಭವ ಎಂದು ಹೊಗಳಿಸಿಕೊಂಡ ಉಪನ್ಯಾಸಕರ ಸಂಕಷ್ಟ. ಹಾಗೆ ಐಟಿಐ ಅತಿಥಿ ಬೋಧಕರದ್ದು ಡಿಪ್ಲೋಮಾ, ಇಂಜಿನಿಯರಿಂಗ್ ಕೋರ್ಸ್ ಮುಗಿಸಿಕೊಂಡು ೮-೯ ಸಾವಿರಕ್ಕೆ ದುಡಿಯುವ ಅವಸ್ಥೆ! ಐಟಿಐ ಕಾಲೇಜ್‌ಗಳು ಕಾಯಂ ಸಿಬ್ಬಂದಿ ಇಲ್ಲದೆ ಅತಿಥಿ ಬೋಧಕರನ್ನೇ ಅವಲಂಬಿಸಿವೆ. ಆದರೂ ಉದ್ಯೋಗ ಭದ್ರತೆ ನೀಡಿಲ್ಲ, ಲಾಕ್ಡೌನ್ ಅವಧಿಯ ಸಂಬಳ ಸಿಕ್ಕಿಲ್ಲ. ವಸತಿ ಶಾಲೆಗಳಲ್ಲಿ ದುಡಿಯುವ ಅತಿಥಿ ಶಿಕ್ಷಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳ ಸರ್ವತೋಮುಖ ಪ್ರಗತಿಗಾಗಿ ಕಲೆ, ಸಂಗೀತ, ರಂಗಶಿಕ್ಷಣವು ತುಂಬಾ ಮುಖ್ಯವೆಂದು ಶಿಕ್ಷಣ ತಜ್ಞರು ಮಾತ್ರವಲ್ಲದೇ ಸರ್ಕಾರದ ಆಯೋಗಗಳೂ ಸಹ ವರದಿಮಾಡಿವೆ. ಆದರೆ ಈ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಎಷ್ಟೋ ವರ್ಷಗಳಾಗಿದೆ. ಹಾಗಾಗಿ ಇಂದು ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಮಾಹಿತಿ ಸಂಗ್ರಹಣೆಯ ಕಂಪ್ಯೂಟರ್‌ಗಳ ಮಟ್ಟಕ್ಕೆ ಇಳಿಸಿದ್ದಾರೆ.
ಇನ್ನು ಕಟ್ಟಡ ಕಾರ್ಮಿಕರು- ಸಣ್ಣಪುಟ್ಟ ಮನೆಗಳಿಂದ ಹಿಡಿದು, ದೊಡ್ಡ ದೊಡ್ಡ ಬಂಗಲೆ, ಊರು-ಪಟ್ಟಣ- ನಗರಗಳನ್ನೇ ನಿರ್ಮಿಸುವವರು ಯಾವುದೋ ಜೋಪಡಿಗಳಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇವರ ಹಿತ ಕಾಪಾಡಲೆಂದು ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಭ್ರಷ್ಟಾಚಾರದ ಮೂಲಕ ಪೋಲಾಗುತ್ತಿದೆ ಹಾಗೂ ಸರ್ಕಾರದ ಯಾವ್ಯಾವುದೋ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಮತ್ತೊಂದೆಡೆ ಇನ್ನೊಂದು ವರ್ಗ ಹೊಸದಾಗಿ ಉದ್ಯೋಗ ಕ್ಷೇತ್ರದಲ್ಲಿರುವ ಫುಡ್ ಡೆಲಿವರಿ ಪಾರ್ಟ್ನರ್‌ಗಳು ಹೆಸರಿಗೆ ಮಾತ್ರ ಪಾರ್ಟ್ನರ್‌ಗಳು. ಪದೇಪದೇ ಬದಲಾಗುತ್ತಿರುವ ಆರ್ಡರ್ ಚಾರ್ಜಸ್‌ಗಳು, ಇನ್ಸೆಂಟಿವ್‌ಗಳು ಕಡಿತಗೊಳ್ಳುತ್ತಿವೆ. ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆ ಅವರನ್ನು ಹಿಂಡಿ ಹಿಪ್ಪೆ ಮಾಡಿದೆೆ. ಅವರು ಕಾರ್ಮಿಕರಲ್ಲ, ಯಾವುದೇ ಕಾರ್ಮಿಕ ಕಾನೂನುಗಳು ಅವರಿಗೆ ಅನ್ವಯಿಸುವುದಿಲ್ಲ. ಸಾಮಾಜಿಕ ಜೀವನ ಭದ್ರತೆ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ವಿದೇಶಗಳಿಂದ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಹೇಳುವಾಗ, ಅಧಿಕಾರಸ್ಥರು ಏಕೆ ಕೋಟ್ಯಾಂತರ ದುಡಿಯುವ ಜನ ಈ ಪರಿ ಸಮಸ್ಯೆಗಳ ಕೂಪದಲ್ಲಿ ಮಳುಗಿದ್ದಾರೆ ಎಂಬ ಪ್ರಶ್ನೆಗೆ ಜಾಣ ಕಿವುಡನ್ನು ಪ್ರದರ್ಶಿಸುತ್ತಾರೆ. ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡುವುದನ್ನು ನಿಲ್ಲಿಸಿ ಯಾವುದೋ ಕಾಲವಾಗಿದೆ. ಇನ್ನೊಂದೆಡೆ ವ್ಯಾಪಕ ಖಾಸಗೀಕರಣ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ನಿರುದ್ಯೋಗವು ಭೂತಾಕಾರವಾಗಿ ಬೆಳೆದು, ಇಡೀ ದೇಶದ ಸಂಪತ್ತನ್ನು ಸೃಷ್ಟಿಸುವ ದುಡಿಯುವ ಕೈಗಳು ತಮ್ಮ ಕತ್ತನ್ನೇ ಹಿಸುಕಿಕೊಂಡು ಆತ್ಮಹತ್ಯೆಗೆ ಮರೆಹೋಗುತ್ತಿವೆ.
ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಬೇಡಿಕೆ ದಿನದಂದು ಅಖಿಲ ಭಾರತ ನಿರುದ್ಯೋಗಿ ಯುವ ಸಮೂಹದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಈ ಕೆಳಗಿನ ಬೇಡಿಕೆಗಳನ್ನು ಯಾವುದೇ ವಿಳಂಬವಿಲ್ಲದೆ ಪರಿಹರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯಸರ್ಕಾರಗಳನ್ನು ಆಗ್ರಹಿಸಲಾಯಿತು.
ಬೇಡಿಕೆಗಳು:
೧) ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು ೨೦೨೧ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ.
೨) ರಾಜ್ಯ ಸರ್ಕಾರದಿಂದ ತಡೆಹಿಡಿದ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಈ ಕೂಡಲೇ ಪುನರ್ ಆರಂಭಿಸಿ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸಿ.
೩) ೨೦೨೦ರಲ್ಲಿ ಆರಂಭವಾದ ಪ್ರಥಮ/ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ನೇಮಕಪತ್ರವನ್ನು ನೀಡಿ.
೪) ಸರ್ಕಾರಿ ಐಟಿಐಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಲಾಕ್ಡೌನ್ ಅವಧಿಯ ವೇತನವನ್ನು ಕೂಡಲೇ ಬಿಡುಗಡೆ ಮಾಡಿ ಹಾಗೂ ಸೇವಾಭದ್ರತೆ ಒದಗಿಸಿ.
೫) ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಿ.
೬) ಆರೋಗ್ಯ ಇಲಾಖೆಯಲ್ಲಿ ಕೋವಿಡ್ ಡ್ಯೂಟಿ ಸೇರಿದಂತೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಸೇವೆಸಲ್ಲಿಸುತ್ತಿರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್ಸ್, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಡಿ-ಗ್ರೂಪ್ ನೌಕರರು ಸೇರಿದಂತೆ ಅರೆವೈದ್ಯಕೀಯ ಸಿಬ್ಬಂದಿಗಳನ್ನು ಖಾಯಂಗೊಳಿಸಿ.
೭) ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಿಸಲು ಎಲ್ಲಾ ಶಾಲೆಗಳಲ್ಲಿ ಸಂಗೀತ ಶಿಕ್ಷಕರು, ರಂಗ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರನ್ನು ನೇಮಕ ಮಾಡಿ. 
೮) KPSC ಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತಡೆಗಟ್ಟಿ.
೯) ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯ ದುರುಪಯೋಗವನ್ನು ನಿಲ್ಲಿಸಿ.
10) ಫುಡ್ ಡೆಲಿವರಿ ಪಾರ್ಟ್ನರ್‌ಗಳನ್ನು ಕಾರ್ಮಿಕರೆಂದು ಪರಿಗಣಿಸಿ ಹಾಗೂ ಈ ಔದ್ಯೋಗಿಕ ಕ್ಷೇತ್ರಕ್ಕೆ ಸೂಕ್ತ ಕಾನೂನುಗಳನ್ನು ರೂಪಿಸಿ.  
ಇದೇ ಸಂದರ್ಭದಲ್ಲಿ ಕೋವಿಡ್ ಎರಡನೇಯ ಅಲೆಯ ಸಂದರ್ಭದಲ್ಲಿ ಧಾರವಾಡದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ೨೫ ಜನ ವೈದ್ಯಕೀಯ/ಅರೆವೈದ್ಯಕೀಯ ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ತೆಗೆದಿರುವುದನ್ನು ಖಂಡಿಸಿ, ಅವರನ್ನು  ಈ ಕೂಡಲೇ ಸೇವೆಗೆ ಸೇರಿಸಿಕೊಂಡು/ ಮುಂದುವರೆಸಿ ಅವಶ್ಯಕವಿರುವಲ್ಲಿ ನಿಯೋಜನೆಗೊಳಿಸಬೇಕೆಂದು ಹಾಗೂ ಬಾಕಿ ಇರುವ ಜೂನ್ ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಭವಾನಿ ಶಂಕರ್, ರಣಜಿತ್ ಧೂಪದ್, ರಂಗ ಶಿಕ್ಷಕರಾದ ವಿಜಯ್ ದೊಡ್ಡಮನಿ, ಆರೋಗ್ಯ ಕ್ಷೇತ್ರದ ಪ್ರವೀಣ್, ರತ್ನಾ, ರೂಪಾ, ಗಿರಿಜಾ, ಫುಡ್ ಡೆಲಿವರಿ ಪಾರ್ಟ್ನರ್ ಮಹಮದ್ ರಫಿ ಸೇರಿದಂತೆ ಪುನೀತ್ ಹೊನ್ನಪ್ಪನವರ, ಸಿದ್ದಾರ್ಥ್ ಚೌಹಾಣ್ ಮುಂತಾದವರಿದ್ದರು.


Reported By:
ರಘು ನರಗುಂದ


0 Response to "“ಅಂದು-ಬ್ರಿಟಿಷರೇ ಭಾರತ ಬಿಟ್ಟು ತೊಲಗಿ; ಇಂದು-ಉದ್ಯೋಗ ಕೊಡದ ಆಳ್ವಿಕರೇ ಅಧಿಕಾರ ಬಿಟ್ಟು ತೊಲಗಿ”-Dharwad"

Post a Comment

Article Top Ads

Central Ads Article 1

Middle Ads Article 2

Article Bottom Ads