
ಕೂರಿಗೆ ಬಿತ್ತನೆ ರೈತರಿಗೆ ವರದಾನ-Siruguppa-Kisan Jagruti TV
Tuesday, July 6, 2021
Comment
ಸಿರುಗುಪ್ಪ : ಅಲ್ಪ ನೀರಿನಲ್ಲಿ ಹಾಗೂ ಕಾಲುವೆ ನೀರುನಂಬಿ ಕೂರದೆ ಭತ್ತ ಬೆಳೆಯುವ ಕೂರಿಗೆ ಬಿತ್ತನೆ ವಿಧಾನ ರೈತರ ಕೈ ಹಿಡಿದಿದೆ. ತಾಲೂಕಿನ ತುಂಗಾಭದ್ರಾ ಮತ್ತು ವೇದವತಿ ಹಗರಿ ಅಚ್ಚುಕಟ್ಟು ಭಾಗದಲ್ಲಿ ನೇರ ಕೂರಿಗೆ ಭತ್ತದ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವುದು ರೈತರಿಗೆ ವರದಾನವಾಗಿದೆ.
ತಾಲೂಕಿನ ನೆಹರು ಕ್ಯಾಂಪನ ನಾಗಭೂಷಣಂ ಅವರ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಕೂರಿಗೆ ಬಿತ್ತನೆ ಮಾಡಿದರು. ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳು ಭೇಟಿ ನೀಡಿದರು.
ಕಡಿಮೆ ನೀರು, ಸಮಯಕ್ಕೆ ಸರಿಯಾಗಿ ಬೆಳೆ, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವಲ್ಲಿ ಈ ಪದ್ಧತಿ ಹೆಚ್ಚು ರೈತರಿಗೆ ಅನುಕೂಲ. ಈಗಾಗಲೇ ತಾಲೂಕಿನಲ್ಲಿ ಸಾಕಷ್ಟು ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಬೆಳೆಯಲು ಮುಂದಾಗಿದ್ದಾರೆ. ಜೊತೆಗೆ ಒಂದೇ ಬೆಳೆಗೆ ಸೀಮಿತವಾಗದೆ ಪರ್ಯಾಯ ಬೆಳೆ ಬೆಳೆದು ಕೂಡ ಸೈ ಎನಿಸಿಕೊಂಡಿದ್ದಾರ.
ನೇರ ಕೂರಿಗೆ ಬಿತ್ತನೆ: ತಾಲೂಕಿನ ಹಚ್ಚೋಳ್ಳಿ, ತೆಕ್ಕಲಕೋಟೆ, ಕರೂರು, ಸಿರುಗುಪ್ಪ ಈ ನಾಲ್ಕು ಹೋಬಳಿಯ ಭಾಗಗಳಲ್ಲಿ 1000 ಎಕರೆ ಪ್ರದೇಶದಲ್ಲಿ ಈಗಾಗಲೇ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಮಾಡಿದ್ದು, ಜುಲೈ ಅಂತ್ಯದವರೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಪದ್ಧತಿ ಬಿತ್ತನೆ ಮಾಡಲಿದ್ದಾರೆ.
ರೈತರಿಗೇ ಅನುಕೂಲ: ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿಯ ಪ್ರತಿ ಎಕರೆಗೆ 25 ಸಾವಿರ ಖರ್ಚು ಮಾಡಿದರೆ, ಕೂರಿಗೆ ಪದ್ಧತಿಗೆ 15 ಸಾವಿರಷ್ಟು ಮಾತ್ರ ಖರ್ಚು ಮಾತ್ರ ಬರುತ್ತದೆ. ಈ ಕೂರಿಗೆ ಭತ್ತ ಬಿತ್ತನೆಯಿಂದ ನಮಗೆ ಸಾಕಷ್ಟು ಲಾಭ, ಅನುಕೂಲ ಆಗಿದೆ. ನಾವು ಬೆಳೆದದ್ದನ್ನು ಕಂಡು ಸುತ್ತಮುತ್ತಲಿನ ಗ್ರಾಮದ ಕೆಲ ರೈತರು ಇದೇ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಪದ್ಧತಿಯನ್ನು ಎಲ್ಲರೂ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ ಆಗುತ್ತದೆ. ಜೊತೆಗೆ ಈ ಕೃಷಿಯಿಂದ ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಭವಿಷ್ಯದ ಪೀಳಿಗೆಗೂ ನೆಮ್ಮದಿಯ ವಾತಾವರಣ ನಿರ್ಮಿಸಿಕೊಡಬಹುದಾಗಿದೆ ಎನ್ನುತ್ತಾರೆ ರೈತರು.
ಸಾಂಪ್ರದಾಯಿಕ ನಾಟಿ ಪದ್ಧತಿಗೆ ಅಧಿಕ ನೀರು, ಹೆಚ್ಚು ಕೂಲಿಕಾರರು, ವ್ಯಾಪಕ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವ ಜೊತೆಗೆ ಮಣ್ಣಿನ ಮಾಲಿನ್ಯವೂ ಹೆಚ್ಚಾಗುತ್ತದೆ. ಆದರೆ, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೂರಿಗೆ ಭತ್ತದ ಬಿತ್ತನೆ ರೈತರಿಗೆ ಹೆಚ್ಚು ವರದಾನ ಆಗಲಿದೆ.
ತಾಲೂಕಿನ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಎಲ್ಲಾ ಕೊನೆಭಾಗದ ರೈತರ ನೀರಿನ ಸಮಸ್ಯೆಗೆ ಕೂರಿಗೆ ಭತ್ತದ ಬಿತ್ತನೆ ಪರಿಹಾರ ಮಾರ್ಗವಾಗಿದೆ.ಯಾವ ಪ್ರದೇಶದ ಭೂಮಿಗಳಲ್ಲಿ ಕೂರಿಗೆ ಬಿತ್ತನೆ ಮಾಡಲು ಸಾಧ್ಯವಿದೆಯೋ, ಅಲ್ಲೆಲ್ಲಾ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗುತ್ತದೆ, ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ. 50 ರಿಂದ 60 ರಷ್ಟು ನೀರಿನ ಸಮಸ್ಯೆ ನಿಯಂತ್ರಿಸಬಹುದು. ನಮ್ಮ ತಾಲೂಕಿನಲ್ಲಿ ಐದು ಸಾವಿರ ಎಕರೆ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ನಡೆದಿದೆ, ಜುಲೈ ಅಂತ್ಯದವರೆಗೆ ಇನ್ನೂ ನಾಲ್ಕು ಸಾವಿರ ಬಿತ್ತನೆ ಆಗುವ ನೀರಿಕ್ಷೆ ಇದೆ.
ನಜೀರ್ ಅಹ್ಮದ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸಿರುಗುಪ್ಪ.
ನೀರಾವರಿ ಅಚ್ಚುಕಟ್ಟು ಭಾಗದ ರೈತರು ಹಾಗೂ ಕೊನೆ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುವ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ. ಈ ರೀತಿಯ ಬೆಳೆ ಪದ್ಧತಿಯಿಂದ ಖರ್ಚು-ವೆಚ್ಚ ಕಡಿಮೆ ಆಗುವ ಜೊತೆಗೆ ಅಧಿಕ ಲಾಭ ಪಡೆಯಬಹುದಾಗಿದೆ. ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದಾಗಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ರೈತರಿಗೆ ಲಾಭಾಂಶ ದೊರೆಯುವುದು ಅಷ್ಟಕಷ್ಟೇ. ಆದರೆ, ಕೂರಿಗೆ ಭತ್ತ ಬಿತ್ತನೆಯಿಂದ ರೈತರ ಆದಾಯ ದ್ವಿಗುಣ ಆಗುವ ಜೊತೆಗೆ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟಬಹುದಾಗಿದೆ. ಕೂರಿಗೆ ಬಿತ್ತನೆ ಮಾಡಿದ ಮರುದಿನ ಒಂದು ಎಕರೆಗೆ 700ಎಂಎಲ್ ಪೆಂಡಿಮೀಥಿಲಿನ ಕಳೆ ನಾಶಕವನ್ನು 200ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.
ಡಾ.ಎಂ.ಎ.ಬಸವಣ್ಣೆಪ್ಪ, ಮುಖ್ಯಸ್ಥರು, ಕೃಷಿ ಸಂಶೋಧನೆ ಕೇಂದ್ರ, ಸಿರುಗುಪ್ಪ.
ವರದಿ: ಚನ್ನಕೇಶವ ಸಿ.ಡಿ.
0 Response to "ಕೂರಿಗೆ ಬಿತ್ತನೆ ರೈತರಿಗೆ ವರದಾನ-Siruguppa-Kisan Jagruti TV"
Post a Comment